ಸಂಶೋಧಕರು
ಕೃಷ್ಣಭಟ್ಟ, ಸೇಡಿಯಾಪು, 1902-1996

ಸೇಡಿಯಾಪು ಕೃಷ್ಣಭಟ್ಟ ಅವರು ಕನ್ನಡದ ಹಿರಿಯ ವಿದ್ವಾಂಸರು ಮತ್ತು ಸೃಜನಶೀಲ ಲೇಖಕರಲ್ಲಿ ಒಬ್ಬರು. ಅವರು ಕರಾವಳಿ ಕರ್ನಾಟಕಕ್ಕೆ ಹೆಚ್ಚು ವಿಶಿಷ್ಟವಾದ, ಪಂಡಿತ ಪರಂಪರೆಯಲ್ಲಿ ತರಬೇತಿ ಪಡೆದವರು. ಅವರಿಗೆ ಕನ್ನಡ ಮತ್ತು ಸಂಸ್ಕೃತಗಳ ಆಳವಾದ ತಿಳಿವಳಿಕೆಯೂ ಇಂಗ್ಲಿಷ್ ಅನ್ನು ಬಳಸುವ ಸಾಮರ್ಥ್ಯವೂ ಇತ್ತು. ವ್ಯಾಕರಣ, ಛಂದಸ್ಸು, ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಅವರು ಮುಖ್ಯವಾದ ಕೊಡುಗೆ ನೀಡಿದ್ದಾರೆ. ಅವರು ಮಾಡಿರುವ ಸಂಶೋಧನೆ ಮತ್ತು ನೀಡಿರುವ ಒಳನೋಟಗಳನ್ನು ಪರಿಶೀಲಿಸುವ ಕೆಲಸವು, ಇನ್ನೂ ಸರಿಯಾಗಿ ನಡೆದಿಲ್ಲ. ಅವು ಹೊಸ ದಾರಿಗಳನ್ನು ತೋರಿಸಿವೆ; ಹಳೆಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿವೆ. ಗಾಂಧೀವಾದದಿಂದ ಪ್ರಭಾವಿತರಾದ ಕೃಷ್ಣಭಟ್ಟರು ಅಧ್ಯಾಪಕರ ಕೆಲಸವನ್ನು ಬಿಟ್ಟು, ಜೀವನ ನಿರ್ವಹಣೆಗಾಗಿ ಆಯುರ್ವೇದವನ್ನು ಆಶ್ರಯಿಸಿದ್ದರು. ಹೊಸ ಪರಿಕಲ್ಪನೆಗಳ ಸೃಷ್ಟಿ ಮತ್ತು ಅವುಗಳ ತರ್ಕಬದ್ಧವಾದ ಬೆಳವಣಿಗೆಗೆ ಮೀಸಲಾಗಿದ್ದ ಜೀವನವನ್ನು ನಡೆಸಿದ ಕೃಷ್ಣಭಟ್ಟರ ಮುಖ್ಯ ಪುಸ್ತಕಗಳು ಈ ರೀತಿ ಇವೆ:

  1. ಕನ್ನಡ ನಿಘಂಟು, 1951
  2. ಕನ್ನಡ ವರ್ಣಗಳು, 1955
  3. ಗಮಕ ಸಮಾಸ, 1991
  4. ಕನ್ನಡ ಛಂದಸ್ಸು, 1988
  5. ಛಂದೋಗತಿ, 1985
  6. ಕನ್ನಡ ಗೀತಿಕೆಯ ಲಕ್ಷಣ ಮತ್ತು ಧಾಟಿ, 1977
  7. ಕೆಲವು ದೇಶನಾಮಗಳು, ಭಾಷಾಶಾಸ್ತ್ರ, ಸ್ಥಳ ನಾಮಗಳ ಅಧ್ಯಯನ. 1975
  8. ತಥ್ಯದರ್ಶನ, 1991
  9. ವಿಚಾರ ಪ್ರಪಂಚ, ಲೇಖನಗಳ ಸಂಕಲನ, 1994
  10. ಪಳಮೆಗಳು, ಸಣ್ಣ ಕಥೆಗಳು
  11. ಚಂದ್ರಖಂಡ ಮತ್ತು ಇತರ ಸಣ್ಣ ಕಾವ್ಯಗಳು, 1969
  12. ‘Discovery of Facts’. (A Translation of ‘Tathyadarshna’)

ಇವುಗಳಲ್ಲಿ ಕೆಲವು ಪುಸ್ತಕಗಳ ಸ್ಥೂಲ ಪರಿಚಯ ಮಾಡಿಕೊಡುವ ಅಗತ್ಯವಿದೆ. ತಥ್ಯದರ್ಶನವು ಆರ್ಯ, ಜಾತಿ, ವರ್ಣ ಮತ್ತು ಲಿಂಗ ಎಂಬ ನಾಲ್ಕು ವಿಚಾರಗಳನ್ನು ತೆಗೆದುಕೊಂಡು, ಅವುಗಳ ಮೂಲ ಅರ್ಥ ಮತ್ತು ಬೆಳವಣಿಗೆಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತದೆ. ಕನ್ನಡ ಛಂದಸ್ಸು, ಆ ಭಾಷೆಗೆ ಸಹಜವಾದ ಮೂಲ ಛಂದೋರೂಪಗಳ ಪರಿಚಯ ಮಾಡಿಕೊಡುತ್ತದೆ. ಗೀತಿಕೆಯನ್ನು ಕುರಿತ ಹೊತ್ತಿಗೆಯು ಅಂತಹ ಒಂದು ರೂಪವನ್ನು ವಿವರವಾಗಿ ಪರಿಶೀಲಿಸುತ್ತದೆ. ಛಂದೋಗತಿಯು ಗತಿ(ಚಲನೆ) ಎಂಬ ಪರಿಕಲ್ಪನೆಯನ್ನು ಆಧಾರವಾಗಿ ಇಟ್ಟುಕೊಂಡು, ಕನ್ನಡ ಛಂದಸ್ಸಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ವಿವರಿಸುವ ಗಂಭೀರ ಪ್ರಯತ್ನ. ಗಮಕಸಮಾಸವು ಕನ್ನಡದಲ್ಲಿ ಇದೆಯೋ ಇಲ್ಲವೋ ಎನ್ನುವುದನ್ನು ಕುರಿತು ಮೊದಲಿನಿಂದಲೂ ಚರ್ಚೆ ನಡೆದಿದೆ. ಕೃಷ್ಣಭಟ್ಟರು ಅದನ್ನು ಉಳಿಸಿಕೊಳ್ಳುವುದಕ್ಕೆ ಪರವಾದ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಕರಾವಳಿಯನ್ನು ಆಳಿದ ರಾಜನೆತನಗಳಾದ ತುಳು, ಚೇರ, ಕೊಂಕಣ, ಪಾಂಡಿ ಮತ್ತು ಪಾಂಡ್ಯರುಗಳ ಹೆಸರುಗಳ ಹಿನ್ನಲೆಯನ್ನು ಹುಡುಕುವ ಕೃತಿ ಕೆಲವು ದೇಶನಾಮಗಳು. ವಿಚಾರಪ್ರಪಂಚವು ಅನೇಕ ಮಹತ್ವದ ಲೇಖನಗಳ ಸಂಕಲನ. ಪಂಪನ ಪ್ರಸಿದ್ಧ ಪದ್ಯಗಳಲ್ಲಿ ಒಂದಾದ, ನೆತ್ತಮನಾಡಿ ಭಾನುಮತಿ ಸೋಲ್ತಡೆ....” ಎಂಬುದರ ಅರ್ಥವನ್ನು ಹುಡುಕುವುದರಿಂದ ಮೊದಲಾಗಿ, ಹೊಸಗನ್ನಡ ಕವಿತೆಗೆ ಬಹಳ ಉಪಯುಕ್ತವಾದ ಪ್ರವೇಶಿಕೆಯವರೆಗೆ ಈ ಪುಸ್ತಕದ ಹರಹು ಇದೆ. ಇವುಗಳ ನಡುವೆ, ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾದ ಇಡ್ಲಿಯ ಮೂಲವನ್ನು ಹುಡುಕುವ ಬರವಣಿಗೆಯೂ ಇದೆ. ಬೇರೆ ಕೆಲವು ಲೇಖನಗಳು, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಕನ್ನಡ-ಕನ್ನಡ ನಿಘಂಟಿನ ಸ್ವರೂಪವನ್ನು ಚರ್ಚಿಸುತ್ತವೆ. ಹಾಗೆಯೇ ಅನೇಕ ಬರೆಹಗಳು ಕರಾವಳಿ ಕರ್ನಾಟಕದ ಜನಪ್ರಿಯ ಪ್ರಕಾರವಾದ ಯಕ್ಷಗಾನದ ಬಗ್ಗೆ, ಸ್ವಂತಿಕೆಯಿರುವ ವಿಚಾರಗಳನ್ನು ಹೇಳುತ್ತವೆ. ಕೃಷ್ಣಭಟ್ಟರದು ಪಾರಂಪರಿಕ ಜ್ಞಾನ ಮತ್ತು ಆಧುನಿಕ ದೃಷ್ಟಿಕೋನಗಳ ಆರೋಗ್ಯಕರ ಸಂಯೋಜನೆ. ಈಶ್ವರಸಂಕಲ್ಪ ಎನ್ನುವುದು ಅವರ ಕಿರು ಆತ್ಮಕಥೆ. ಸೇಡಿಯಾಪು ನೆನಪುಗಳು ಎನ್ನುವುದು, ಕನ್ನಡದ ಹೆಸರಾಂತ ಲೇಖಕಿಯಾದ ವೈದೇಹಿಯವರು ದಾಖಲೆ ಮಾಡಿರುವ ಸೇಡಿಯಾಪು ನೆನಪುಗಳ ಸಂಗ್ರಹ.

ಸೇಡಿಯಾಪು ಅವರ ವಿಚಾರಪ್ರಪಂಚ ಕೃತಿಗೆ 1994 ರಲ್ಲಿ ಪಂಪ ಪ್ರಶಸ್ತಿ ಬಂತು. ಶತಾಂಜಲಿ ಎನ್ನುವುದು ಅವರಿಗೆ ಕೊಟ್ಟ ಗೌರವ ಗ್ರಂಥದ ಹೆಸರು.(2002)

ಮುಖಪುಟ / ಸಂಶೋಧಕರು